: 08282- 256301/256307

ಪ್ರಿಯ ವಿದ್ಯಾರ್ಥಿಗಳೆ,

ಭಾರತೀಯ ಸಮಾಜವು ಕೃಷಿ ಆಧಾರಿತ ಸಮಾಜದಿಂದ ಜ್ಞಾನ ಆಧಾರಿತ ಸಮಾಜವಾಗಿ ಪರಿವರ್ತನೆ ಹೊಂದುತ್ತಿದ್ದು ಈಗ ಜಾಗತೀಕರಣಗೊಂಡ ಮಾಹಿತಿ ಸಮಾಜವಾಗಿ ವಿಶ್ವದಲ್ಲಿ ತನ್ನ ಗುರುತನ್ನು ಪಡೆಯುವ ಪ್ರಯತ್ನದಲ್ಲಿದೆ. ಜಾಗತಿಕ ಮಟ್ಟದಲ್ಲಿ ಹೊಸ ಅವಕಾಶಗಳನ್ನು ತೆರೆದಿಡುತ್ತಿರುವ ಈ ಪರ್ವದಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ಸಂಪನ್ಮೂಲಗಳೆಂದರೆ ಜ್ಞಾನ ಹಾಗೂ ಕೌಶಲ್ಯಗಳು. ದೇಶದ ಶಕ್ತಿಯು ಆದೇಶದ ಶಿಕ್ಷಿತ ಯುವಜನರನ್ನು ಅವಲಂಬಿಸಿರುತ್ತದೆ. ಆದ್ದರಿಂದ ವಿಶ್ವವಿದ್ಯಾಲಯಗಳ ಮೂಲಕ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಗೊಳಿಸುವ ಕೆಲಸದಲ್ಲಿ ತನ್ನೆಲ್ಲ ಶಕ್ತಿಯನ್ನು ಹೂಡುವುದು ದೇಶವು ಮಾಡಬಹುದಾದ ಅತ್ಯಂತ ಪ್ರಬುದ್ಧವಾದ ಹೂಡಿಕೆಯಾಗಿದೆ.

ಯಾವುದೇ ವಿಶ್ವವಿದ್ಯಾಲಯದ ಎದುರಿಗೆ ಇರುವ ಸವಾಲೆಂದರೆ ವಿಶೇಷವಾದ ಜ್ಞಾನ, ಸಂವಹನೆ, ಸಂಶೋಧನೆ, ನಾಯಕತ್ವ ಹಾಗೂ ಹೊಸದನ್ನು ಸೃಷ್ಟಿಸುವ ಕೌಶಲ್ಯಗಳಿಗಾಗಿ ಮನ್ನಣೆ ಸಿಕ್ಕುವಂಥ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸನ್ನದ್ಧರಾಗುವಂತೆ ಶಿಕ್ಷಣ ಹಾಗೂ ತರಬೇತಿಯನ್ನು ನೀಡಿ, ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸಿ ದೇಶದ ಪ್ರಗತಿಗೆ ಸಹಾಯವಾಗುವುದಾಗಿದೆ.

‘ಎಲ್ಲರಿಗೂ ಸಮಗ್ರ ಶಿಕ್ಷಣ’ ಎನ್ನುವ ಧ್ಯೇಯವನ್ನು ಹೊಂದಿರುವ ಕುವೆಂಪು ವಿಶ್ವವಿದ್ಯಾಲಯವು ವಿದ್ಯಾರ್ಥಿಗಳು ಬೆಳೆದು ಪ್ರಕಾಶಿಸುವಂತೆ ಮಾಡುವ ವಾತಾವರಣವನ್ನು ಹೊಂದಿದೆ. ಸುಸಜ್ಜಿತ ತರಗತಿ ಕೊಠಡಿಗಳು, ಗ್ರಂಥಾಲಯ, ಇಂಟರ್ನೆಟ್ ಸೌಲಭ್ಯ, ವಸತಿ ನಿಲಯಗಳು ಹಾಗೂ ಕ್ರೀಡಾ ಸೌಲಭ್ಯಗಳಿರುವ ವ್ಯವಸ್ಥಿತವಾದ ಮೂಲ ಸೌಕರ್ಯಗಳು ವಿಶ್ವವಿದ್ಯಾಲಯದಲ್ಲಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ನಮ್ಮ ಶಿಕ್ಷಕರು ತಮ್ಮ ಜ್ಞಾನಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿ ಗಣ್ಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶಿಕ್ಷಕವರ್ಗ, ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳ ಸಾಧನೆಗಳು ಗಮನಾರ್ಹವಾಗಿವೆ. ಪ್ರಾಯೋಗಿಕವಾದ, ಉದ್ದಿಮೆಗಳಿಗೆ ಸಹಾಯವಾಗುವ ಪಠ್ಯಕ್ರಮಗಳು, ವಿಚಾರಸಂಕಿರಣಗಳು, ಉಪನ್ಯಾಸಗಳು, ಸಮ್ಮೇಳನಗಳು ಹಾಗೂ ಮೌಲ್ಯಪೂರಿತವಾದ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡಲು ನಾವು ಬದ್ಧರಾಗಿದ್ದೇವೆ. ಈ ದಿಶೆಯಲ್ಲಿ ವಿಶ್ವವಿದ್ಯಾಲಯವು ಉದ್ದಿಮೆಗಳು, ಸರ್ಕಾರ, ವಾಣಿಜ್ಯ ಕ್ಷೇತ್ರ ಹಾಗೂ ಸಂಶೋಧನಾ ಸಂಸ್ಥೆಗಳೊಂದಿಗೆ ಸಂಬಂಧಗಳನ್ನು ಹಾಗೂ ಸಹಭಾಗಿತ್ವ, ಪಾಲುಗಾರಿಕೆಗಳನ್ನು ರೂಪಿಸಿಕೊಂಡಿದೆ.

ಬೋಧನೆ, ಕಲಿಕೆ ಹಾಗೂ ಸಂಶೋಧನೆಗಳಲ್ಲಿ ಪ್ರಯೋಗಶೀಲತೆಯನ್ನು ತರುವ ಮೂಲಕ ನಮ್ಮ ವಿದ್ಯಾರ್ಥಿಗಳು ಜವಾಬ್ದಾರಿಯುಳ್ಳ ನಾಗರೀಕರು ಹಾಗೂ ನಾಳೆಯ ನಾಯಕರು ಆಗಲಿ ಎನ್ನುವ ಪ್ರಯತ್ನ ನಮ್ಮದಾಗಿದೆ. ದೇಶವನ್ನು ಕಟ್ಟುವ ನಮ್ಮ ಧ್ಯೇಯದ ಸಾಧನೆಯ ಕೆಲಸದಲ್ಲಿ ನಮ್ಮ ಜೊತೆಗೆ ಸಹಭಾಗಿಯಾಗಲು ನೀವು ಹೆಮ್ಮೆ ಪಡುತ್ತೀರಿ ಎಂದು ನಂಬುತ್ತೇನೆ.

ಈ ಜ್ಞಾನದೇಗುಲಕ್ಕೆ ನಿಮಗೆ ಸ್ವಾಗತ.